ಕಟ್ಟುಸಿರು : ಎಂದರೆ ಉಸಿರಾಟದ ನಿಲುಗಡೆ (ಏಪ್ನಿಯ), ಅಂಗಕ್ರಿಯಾ ವಿಜ್ಞಾನದಲ್ಲಿ ಕೊಂಚ ಹೊತ್ತು ಬೇಗಬೇಗನೆ ಉಸಿರೆಳೆದುಕೊಂಡು ಬಿಡುತ್ತಲೇ ಇದ್ದರೂ ಉಸಿರು ಕಟ್ಟಿದಂತಾಗುವುದು. ರಕ್ತದಲ್ಲಿ ಇಂಗಾಲಾಮ್ಲದ ಮಟ್ಟ ಎಂದಿಗಿಂತಲೂ ತೀರ ಕುಗ್ಗುವುದರಿಂದ ಮಿದುಳಿನಲ್ಲಿರುವ ಉಸಿರಾಟ ಕೇಂದ್ರಕ್ಕೆ ಇಂಗಾಲಾಮ್ಲದ ಚೋದನೆ ಇಲ್ಲವಾಗುವುದೇ ಮುಖ್ಯ ಕಾರಣ. ನೀರಲ್ಲಿ ಮುಳುಗುವಾಗ ಮಾಡುವಂತೆ, ಬೇಕೆಂದೇ ಉಸಿರು ಹಿಡಿದಾಗಲೂ ಚೆಯ್ನ್‌-ಸ್ಟೋಕ್ಸ್‌ ಉಸಿರಾಟದಲ್ಲೂ ಹೀಗಾಗುತ್ತದೆ. ಕೆಲವು ರೋಗಗಳಲ್ಲಿ ಇದು ಒಳ್ಳೆಯದಲ್ಲವಾದರೂ ಆರೋಗ್ಯವಾಗಿರುವ ಮಕ್ಕಳಲ್ಲೂ ಗಾಢನಿದ್ರೆಯಲ್ಲಿರುವ ವಯಸ್ಸಾದವರಲ್ಲಿ ಏನನ್ನಾದರೂ ನುಂಗುವಾಗ ತಿಂದಿದ್ದು ಉಸಿರ್ನಾಳದಲ್ಲಿ ಹೋಗದಂತೆ ತಡೆವಾಗ ಇದನ್ನು ಕಾಣಬಹುದು. ತಡೆಯಲಾಗದಷ್ಟು ವಿಪರೀತ ನೋವಾದಾಗಲೂ ಕಟ್ಟುಸಿರಾಗಬಹುದು. ಉಸಿರಾಟದ ಕೆಲವು ರೋಗಗಳಲ್ಲಿ ಬಿಟ್ಟು ಬಿಟ್ಟು ಉಸಿರುಕಟ್ಟಬಹುದು. 		(ಎಂ.ಬಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ